ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಕಟ್ಟಾ ದೇಶಪ್ರೇಮಿ, ನಾಡ ಪ್ರೇಮಿ, ಸ್ವಾಭಿಮಾನಿ. ಬ್ರಿಟಿಷರ ದಾಸ್ಯ ಸಂಕೋಲೆಯ ವಿರುದ್ಧ ಸಿಡಿದೆದ್ದ ಆತ್ಮಗೌರವದ ಸಂಕೇತ. ಅವನ ವೀರವತ್ತಾದ ಬದುಕು ಸ್ವಾತಂತ್ರ್ಯ ಪ್ರಿಯರಿಗೆ ಒಂದು ಆದರ್ಶ. ಗ್ರಾಮೀಣ ನೆಲದಲ್ಲಿ ಹುಟ್ಟಿ ನಿಷ್ಠೆ, ಪ್ರಾಮಾಣಿಕತೆ, ನಾಡ ಪ್ರೀತಿಯನ್ನು ಎದೆಯೊಳಗೆ ತುಂಬಿಕೊಂಡು ಹೋರಾಡಿ ಅದಕ್ಕಾಗಿಯೇ ಪ್ರಾಣತೆತ್ತ ಧೀರೋದಾತ್ತ ಹುತಾತ್ಮ. ನಾಡ ಜನರನ್ನು ದಾಸ್ಯದಲ್ಲಿ ಕೆಡವುತ್ತ ಬಂದ ಬ್ರಿಟಿಷರ ಎದೆಗುಂಡಿಗೆಯೊಳಗೆ ಮದ್ದಿಟ್ಟು ನಡುಗಿಸಿದ ವೀರಸೇನಾನಿ. ಸ್ವಾಮಿನಿಷ್ಠೆ, ದೇಶ ಪ್ರೇಮ, ಅಸಹಾಯಕ ಜನರಲ್ಲಿ ಅನುಕಂಪದ ಪ್ರತೀಕವಾಗಿದ್ದ ರಾಯಣ್ಣನ ಬದುಕು ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಒಂದು ರೋಮಾಂಚನಕಾರಿ ಅಧ್ಯಾಯ. ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸಿ ರಾಣಿ ಚೆನ್ನಮ್ಮನಿಗೆ ರಾಜನಿಷ್ಠೆಯನ್ನು ತೋರುತ್ತಾ ನಾಡ ರಕ್ಷಣೆಗೆ ಕೆಚ್ಚೆದೆಯ ಹೋರಾಟ ನಡೆಸಿ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗಮಾಡಿ, ಚೆನ್ನಮ್ಮನಷ್ಟೇ ಎತ್ತರಕ್ಕೆ ಬೆಳೆದ ಅಪ್ರತಿಮ ವೀರ. ಸಂಗೊಳ್ಳಿ ರಾಯಣ್ಣನ ಜೀವನವೇ ಒಂದು ವೀರವತ್ತಾದ ಯಶೋಗಾಥೆ; ಸಿಡಿದರಳಿ ಮುರುಟಿ ಹೋದ ದುಃಖಾಂತ ಕಥೆ ಇಂಥ ರಾಯಣ್ಣ ಜನಪದರಲ್ಲಿ ಚಿರಂಜೀವಿಯಾಗಿ ಉಳಿದು ಹೋಗಿದ್ದಾನೆ. ಅವನ ಹೆಸರು ಹೇಳಿ ಅದೆಷ್ಟೋ ತಾಯಂದಿರು ಅವನಂಥ ಮಕ್ಕಳನ್ನು ಪಡೆಯಲು ಹರಕೆ ಹೊರುತ್ತಾರೆ. ಇಂತಹ ಇತಿಹಾಸ ಪುರುಷನ ಜೀವನ ವಿಚಾರ, ರಾಷ್ಟ್ರಪ್ರೇಮ, ಸಾಹಸ ಪ್ರವೃತ್ತಿ, ಮನುಕುಲದ ಬಗೆಗಿನ ತುಡಿತ, ಜೀವನಾದರ್ಶ, ಸ್ವಾತಂತ್ರ್ಯ ನಿಷ್ಠೆ ಕುರಿತಂತೆ ಸಂಶೋಧನೆ, ಅಧ್ಯಯನ, ದಾಖಲೀಕರಣ ಮತ್ತು ಪ್ರಸಾರ ಕಾರ್ಯ ಅತ್ಯಂತ ಅಗತ್ಯವಿದೆ. ಇತಿಹಾಸದ ಮತ್ತೊಂದು ಮಜಲಿನಲ್ಲಿ ಮರೆಯಾಗಿ ಹೋದ ಅದೆಷ್ಟೋ ಘಟನೆಗಳ, ಸಂಗತಿಗಳ, ವ್ಯಕ್ತಿತ್ವಗಳ ನಿಜ ಪರಿಚಯ, ಇತಿಹಾಸ ಹಾಗೂ ಮುಂದಿನ ಪೀಳಿಗೆಗಳಿಗೆ ಅಧ್ಯಯನ ವಸ್ತುವಾಗಿ, ಆದರ್ಶಗಳ ಉದ್ದೀಪನ, ಸಾಹಿತ್ಯ ಸೃಜನೆಯ ದೃಷ್ಟಿಯಿಂದಲೂ ಮುಖ್ಯವಾಗಿದೆ.

ಪ್ರತಿಷ್ಠಾನ ಸ್ಥಾಪನೆಯ ಉದ್ದೇಶ: ಈ ಹಿನ್ನೆಲೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಾಮಾಜಿಕ, ಸಾಂಸ್ಕøತಿಕ ಹಾಗೂ ನಾಡ ಪ್ರೇಮ ಮುಂತಾದ ಸಂಗತಿಗಳು, ಜೊತೆಗೆ ಅವರ ಜೀವನ ಚರಿತ್ರೆಯ ಕುರಿತು ಹೊಸ ಹೊಸ ಅಧ್ಯಯನಗಳು, ಸಂಶೋಧನೆಗಳು ಹಾಗೂ ಇವುಗಳ ಪ್ರಕಟಣೆಗಳು ಮತ್ತು ಯುವ ಜನತೆಯನ್ನು ರಾಷ್ಟ್ರಾಭಿಮಾನದತ್ತ ಉದ್ದೀಪನಗೊಳಿಸಿ ಪ್ರೋತ್ಸಾಹಿಸುವ ಉದ್ದೇೀಶದಿಂದ ಕರ್ನಾಟಕ ಸರ್ಕಾರವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಷ್ಠಾನವನ್ನು ಸ್ಥಾಪಿಸಿದೆ. ಹಾಗೂ ಪ್ರತಿಷ್ಠಾನವು ದಿನಾಂಕ 04-02-2013 ರಂದು ನೊಂದಣಿಯಾಗಿರುತ್ತದೆ. ಈ ಉದ್ಧೇಶಕ್ಕಾಗಿ ರಚಿತವಾಗಿರುವ ಮಂಡಳಿಯು ಈ ಪ್ರತಿಷ್ಠಾನದ ನೀತಿ ನಿರ್ಧಾರಗಳನ್ನು, ಕಾರ್ಯಕ್ರಮಗಳ ಅನುಷ್ಠಾನಗಳ ಮಾರ್ಗಸೂಚಿಗಳನ್ನು ರೂಪಿಸಿ ನಿರ್ದೇಶಿಸುತ್ತದೆ.