Last modified at 26/10/2018 12:31 by System Account

ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ:

Breeding Policy for Sheep and Goat in Karnataka ಗೆ ಸರ್ಕಾರದ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ:

 1. ಆದೇಶ ಸಂಖ್ಯೆ: ಪಸಂಮೀ 76 ಪಪಾಯೋ 2014 (ಭಾಗ-1) ದಿನಾಂಕ: 03.03.2015
 2. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಇವರ ಏಕ ಕಡತ ಸಂಖ್ಯೆ: KSWDCL/Breeding Policy/2014-15


ಪ್ರಸ್ತಾವನೆ:

          ಮೇಲೆ ಓದಲಾದ ಆದೇಶದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳು ಹಾಗೂ ಡಾ. ಸೀತಾರಾಮ, ಸಹಾಯಕ ನಿರ್ದೇಶಕರು (ನಿವೃತ್ತ) ತಾಂತ್ರಿಕ ಅಧಿಕಾರಿಗಳು ಇವರುಗಳು ತಯಾರಿಸಿದ್ದ ಕರಡು ಕರ್ನಾಟಕದಲ್ಲಿನ ಕುರಿ ಮತ್ತು ಮೇಕೆಗಳ ಸಂವರ್ಧನಾ ನೀತಿಯ (Draft Breeding Policy for Sheep and Goat in Karnataka) ಕುರಿತು ಚರ್ಚಿಸಲು ಹಾಗೂ ಅದನ್ನು ಅನುಮೋದಿಸಲು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ಇತರೆ 10 ಮಂದಿ ಅಧಿಕಾರಿಗಳು/ತಾಂತ್ರಿಕ ಸದಸ್ಯರನ್ನೊಳಗೊಂಡಂತೆ ಸಮಿತಿ ರಚಿಸಲಾಗಿದೆ.

          ಮೇಲೆ (2) ರಲ್ಲಿ ಓದಲಾದ ಉಲ್ಲೇಖದನ್ವಯ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಇವರು ದಿನಾಂಕ: 05.05.2015 ರಂದು ಸರ್ಕಾರದ ಕಾರ್ಯದರ್ಶಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ Breeding Policy for Sheep and Goat in Karnataka ಇವರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿರುತ್ತದೆ. ಸದರಿ ಸಭೆಯಲ್ಲಿ ಚರ್ಚಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, Commissioner of Animal Husbandry, Government of India ಮತ್ತು Director, CSWRI, Avikanagar, Dr. Pradip Ghasasi, Associate Director, Animal Husbandry Division, NARI, Phaltan, Maharastra ಹಾಗೂ ಇತರೆ ಸಮಿತಿಯ ಸದಸ್ಯರುಗಳು ನೀಡಿದ್ದ ಎಲ್ಲಾ ಸಲಹೆ ಸೂಚನೆಗಳನ್ನು ಪರಿಗಣಿಸಲಾಗಿದ್ದು ಸದರಿ Breeding Policy ಗೆ ಅನುಮೋದನೆ ನೀಡುವಂತೆ ಕೋರಿರುತ್ತಾರೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 24 ಕಕುಮ 2015

ಬೆಂಗಳೂರು, ದಿನಾಂಕ: 27.08.2015

          ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರವು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ನಿರ್ವಹಿಸಲಾಗುವ ಅನುಬಂಧದಲ್ಲಿ ವಿವರಿಸಿರುವ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆಗಳ ಸಂವರ್ಧನಾ ನೀತಿಗೆ (Breeding Policy for Sheep and Goat in Karnataka) ಅನುಮೋದನೆ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

       ಮತ್ತು ಅವರ ಹೆಸರಿನಲ್ಲಿ

 

 

    (ಡಿ.ಎಸ್. ಸುದರ್ಶನ್ ಕುಮಾರ್)

     ಸರ್ಕಾರದ ಅಧೀನ ಕಾರ್ಯದರ್ಶಿ

               ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ

(ಪಶುಸಂಗೋಪನೆ)     

ಗೆ,

 1. ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು.
 2. ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು.
 3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
 4. ಶಾಖಾ ರಕ್ಷಾ ಕಡತ: ಹೆಚ್ಚುವರಿ ಪ್ರತಿಗಳು

 

ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆಗಳ ಸಂವರ್ಧನಾ ನೀತಿ/Policy

I – ಪೀಠಿಕೆ:

       ಕರ್ನಾಟಕ ರಾಜ್ಯದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಸಣ್ಣ ಮೆಲಕು ಹಾಕುವ ಪ್ರಾಣಿಗಳಾದ ಕುರಿ ಮತ್ತು ಮೇಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಹಳ್ಳಿ ಪ್ರದೇಶಗಳಲ್ಲಿನ ಬಡ ಕುಟುಂಬಗಳ ಜೀವನೋಪಾಯಕ್ಕೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಧಾರ ಸ್ತಂಭವಾಗಿದೆ. ಆದರೂ ಸಹಾ ಈ ಕೃಷಿ ವಲಯವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಕುರಿಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ.

       ಇಸವಿ 2012 ರ ಗಣತಿಯ ಪ್ರಕಾರ, ಕರ್ನಾಟಕ ರಾಜ್ಯವು ದೇಶದಲ್ಲಿ ಕುರಿ ಮತ್ತು ಮೇಕೆಗಳ ಜಾನುವಾರು ಸಂಖ್ಯೆಯಲ್ಲಿ 3ನೇ ಸ್ಥಾನವನ್ನು ಪಡೆದಿದೆ. ವಾರ್ಷಿಕವಾಗಿ ಅಂದಾಜು ಉತ್ಪಾದನೆಯಾಗುವ 29907 ಟನ್ ನಷ್ಟು ಕುರಿ ಮಾಂಸ ಮತ್ತು 20375 ಟನ್ ನಷ್ಟು ಮೇಕೆ ಮಾಂಸದ ಮೌಲ್ಯ ಕ್ರಮೇಣ ರೂ. 107665 ಮತ್ತು ರೂ. 73350 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಕುರಿ ಸಾಕಾಣಿಕೆಯು ಮುಖ್ಯವಾಗಿ ಬಡ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತರ ಕಸುಬಾಗಿದೆ. ಇವರು ತಮ್ಮ ಕುರಿಗಳನ್ನು ರಸ್ತೆಬದಿಯ ಮರಗಳ ಎಲೆಗಳಿಂದ ಇಲ್ಲವೇ ಕೃಷಿಯ ಉಪ ಉತ್ಪನ್ನಗಳಿಂದ ಇಲ್ಲವೆ ನೈಸರ್ಗಿಕ ಹುಲ್ಲು ಪ್ರದೇಶಗಳಲ್ಲಿ ಮೇಯಿಸುತ್ತಾರೆ. ಮೊದಲು ಜಾನುವಾರುಗಳಿಗೆ ಮೇಯಲು ಬಳಸುತ್ತಿದ್ದ ಬಯಲು ಪ್ರದೇಶಗಳಲ್ಲಿ ಈಗ ಏಕದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಇದರ ಪರಿಣಾಮ, ಪ್ರತಿ ಮೂಲ ವಿಸ್ತೀರ್ಣದಲ್ಲಿ ಮೇಯಲ್ಪಡುವ ಜಾನುವಾರುಗಳ ಸಾಂದ್ರತೆ ಈಗ ಗಣನೀಯವಾಗಿ ಹೆಚ್ಚಾಗಿದೆ. ಮೇಯುವ ಪ್ರದೇಶಗಳ ಕೊರತೆಯಿಂದ ಕುರಿಗಾರರು ಇಂದು ವಲಸೆ ಪದ್ದತಿಯಲ್ಲಿ ಕುರಿ ಮತ್ತು ಮೇಕೆಗಳನ್ನು ಸಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿನ ಕುರಿ ಮತ್ತು ಮೇಕೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ದೀರ್ಘಕಾಲದ ಸಂವರ್ಧನಾ ನೀತಿ ಮತ್ತು ನಿಲುವುಗಳನ್ನು ರೂಪಿಸುವುದು ಅತ್ಯವಶ್ಯಕ.

       ಘನ ಕರ್ನಾಟಕ ಸರ್ಕಾರವು ಪಶುಸಂಗೋಪನೆ ಮತ್ತು ಮೀನುಗಾರಿಕೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಬೆಂಗಳೂರಿನ ಪಶುವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಣಿ ತಳಿಶಾಸ್ತ್ರ ಮತ್ತು ಸಂವರ್ಧನಾ ವಿಭಾಗದ ಸಲಹೆಯ ಮೇರೆಗೆ ಕರಡು ನೀತಿ ಮತ್ತು ನಿಲುವುಗಳನ್ನು ರಚಿಸಿದೆ. ಈ ಪ್ರತಿಗಳನ್ನು ಅಗತ್ಯ ಅವಗಾಹನೆ ಮತ್ತು ಸಲಹೆಗಾಗಿ ಭಾರತ ಸರ್ಕಾರದ ಪಶುಸಂಗೋಪನಾ ಆಯುಕ್ತರಾದ ಡಾ. ಸುರೇಶ್ ಹೊನ್ನಪ್ಪಗೋಳ್ ಅವರಿಗೂ ಮತ್ತು ಕೇಂದ್ರೀಯ ಕುರಿ ಮತ್ತು ಉಣ್ಣೆ ಸಂಶೋಧನಾ ಸಂಸ್ಥೆ, ಅವಿಕಾನಗರ, ರಾಜಸ್ಥಾನ ನಿರ್ದೇಶಕರಿಗೂ ಕಳುಹಿಸಲಾಗಿದೆ. ಕರಡು ಪ್ರತಿಯನ್ನು ಸಮಿತಿಯ ಎಲ್ಲಾ ಸದಸ್ಯರುಗಳಿಗೂ ಕಳುಹಿಸಲಾಗಿದ್ದು ಅವರ ಅಮೂಲ್ಯ ಸಲಹೆ ಸೂಚನೆಗಳನ್ನು ಸೂಕ್ತವಾಗಿ ಅಳವಡಿಸಿಕೊಳ್ಳಲಾಗಿದ್ದು ಅಂತಿಮ ಕರಡು ಪ್ರತಿಯನ್ನು ರಚಿಸಲಾಗಿದೆ ಮತ್ತು ಅನುಮೋದನೆಗಾಗಿ ಸದಸ್ಯರುಗಳಿಗೆ ಕಳುಹಿಸಲಾಗಿದೆ. ಸಮಿತಿಯ ಸಭೆಯನ್ನು ದಿನಾಂಕ: 05.05.2015 ರಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕರೆದಿದ್ದು ಸಮಿತಿಯ ಸಭೆ ನಡೆದಿರುತ್ತದೆ. ಈ ಸಭೆಯಲ್ಲಿ ಅಂತಿಮ ಕರಡು ಪ್ರತಿಯನ್ನು ಪರಾಮರ್ಶಿಸಿ ಅನುಮೋದಿಸಲಾಗಿದೆ.


II. ಜಿಲ್ಲಾವಾರು ಕುರಿ ತಳಿಗಳು ಮತ್ತು ಸಂವರ್ಧನೆಗೆ ಶಿಫಾರಸ್ಸು ಮಾಡಲ್ಪಟ್ಟ ನೀತಿ/Policy

 

ಕ್ರ. ಸ

ಜಿಲ್ಲೆ

ಇರುವ ಸ್ಥಳ

ಶಿಫರಾಸ್ಸು ಮಾಡಲ್ಪಟ್ಟ ನೀತಿ/ಪಾಲಿಸಿ

1

ಬೀದರ್, ಗುಲ್ಬರ್ಗಾ ಮತ್ತು ಯಾದಗಿರಿ

ಡೆಕ್ಕನಿ/ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳು (ವ.ಸ್ಥ.ಕು)

ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

2

ಬಿಜಾಪುರ, ಬೆಳಗಾಂ

ಡೆಕ್ಕನಿ/ವ.ಸ್ಥ.ಕು

ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

3

ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು

ಕೆಂಗುರಿ/ಡೆಕ್ಕನಿ/ವ.ಸ್ಥ.ಕು

ಕೆಂಗುರಿ/ ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಕೆಂಗುರಿ/ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು.

4

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ

ವ.ಸ್ಥ,ಕು

ವ.ಸ್ಥ.ಕು ಗಳನ್ನು ಬಂಡೂರು/ಹಾಸನ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

5

ಧಾರವಾಡ, ಗದಗ ಮತ್ತು ಹಾವೇರಿ

ಡೆಕ್ಕನಿ/ವ.ಸ್ಥ.ಕು

ವ.ಸ್ಥ.ಕು ಗಳನ್ನು ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

6

ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ

ಬಳ್ಳಾರಿ/ವ.ಸ್ಥ.ಕು

ಬಳ್ಳಾರಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಳ್ಳಾರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

7

ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ

ಹಾಸನ/ವ.ಸ್ಥ.ಕು

ಹಾಸನ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಹಾಸನ/ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

8

ಮಂಡ್ಯ

ಬಂಡೂರು/ವ.ಸ್ಥ.ಕು

ಬಂಡೂರು ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಂಡೂರು ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

9

ಮೈಸೂರು, ಬೆಂಗಳೂರು (ಗ್ರಾ. ಮತ್ತು ನ.), ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ತುಮಕೂರು

ಬಂಡೂರು/ವ.ಸ್ಥ.ಕು, ವಿದೇಶಿ ತಳಿಗಳಿಂದ ಸಂವರ್ಧನೆಗೊಂಡ ಮಿಶ್ರ ತಳಿಗಳು

ಬಂಡೂರು ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಂಡೂರು ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

10

ಕೊಡಗು

ವ್ಯ.ಸ್ಥ.ಕು

ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಹಾಸನ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).

 

 • ಕುರಿಗಾರರು ಸ್ವ ಇಚ್ಚೆಯಿಂದ ವಿದೇಶಿ ತಳಿಗಳಾದ ರಾಂಬುಲೇಟ್, ಮೆರಿನೋ, ಢಾರ್ಪರ್ ಮತ್ತು ಸ್ಥಳೀಯ ತಳಿ ಗುಣಗಳುಳ್ಳ ಯಲಗಗಳನ್ನು ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
 • ಯಲಗ ಕುರಿಗಳಿಗೆ ಇನ್ನೂ ಸಹಾ ತಳಿಯ ಸ್ಥಾನಮಾನ ದೊರೆತಿರುವುದಿಲ್ಲ. ಆದರೂ ಸಹಾ ಅದರ ಮಾಂಸದಲ್ಲಿ ವಿಶೇಷ ಗುಣಲಕ್ಷಣಗಳು ಇರುವುದರಿಂದ ಬಿಜಾಪುರ, ಬೆಳಗಾಂ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
 • ಬಹು ಫಲಪ್ರದ ನಾರಿಸುವರ್ಣ ತಳಿಯನ್ನು ಕುರಿಗಳ ಮೌಲ್ಯವರ್ಧನೆಗೆ ಮತ್ತು ಹೆಚ್ಚು ಅವಳಿ ಮತ್ತು ತ್ರಿವಳಿಗಳನ್ನು ಪಡೆಯಲು ಬಳಸಬಹುದಾಗಿದೆ.

II(a). ವರ್ಗೀಕರಣಗೊಂಡಿರುವ ಕರ್ನಾಟಕದಲ್ಲಿರುವ ದೇಶೀಯ ಕುರಿ ತಳಿಗಳ ಗುಣಲಕ್ಷಣಗಳು

ಕ್ರ.ಸ

ತಳಿ

ಮೂಲ

ಹಂಚಿಕೆ

ಬಣ್ಣ

ಸರಾಸರಿ ದೇಹದ ತೂಕ

ಮರಿ ಹುಟ್ಟಿದಾಗ ಸರಾಸರಿ ದೇಹದ ತೂಕ (ಕೆ.ಜಿ)

ತಳಿಯ ಗುಣಲಕ್ಷಣಗಳು

ಷರಾ/ಇತರೆ

ಗಂಡು (ಕೆ.ಜಿ)

ಹೆಣ್ಣು (ಕೆ.ಜಿ)

1

ಬಂಡೂರು

ಮಂಡ್ಯ

ಮಂಡ್ಯ, ಮೈಸೂರು, ಬೆಂಗಳೂರು (ಗ್ರಾ ಮತ್ತು ನ), ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ. ತುಮಕೂರು

ಬೂದು ಅಥವಾ ತೆಳು ಹಳದಿ ಬಣ್ಣ/ಬಿಳಿ ಹಣೆಯ ಮೇಲೆ ಕಲೆ, ಗದ್ದದಲ್ಲಿ ಎರಡು ತುರಾಯಿ

30-35

25-30

2.02

ಸ್ನಾಯುಗಳ ನಡುವೆ ಹಾಲುಗಲ್ಲಿನ ಮಾದರಿಯಲ್ಲಿ ಕೊಬ್ಬು ಶೇಖರಣೆ. ಲೈಂಗಿಕ ಪಕ್ವತೆ; 12-18 ತಿಂಗಳುಗಳು, ಮಾಂಸದ ಇಳುವರಿ ಪ್ರಮಾಣ: 52.5%

ವಿಶ್ವದಲ್ಲಿಯೇ ಅತ್ಯುತ್ತಮ ಮಾಂಸದ ತಳಿಗಳೊಲ್ಲೊಂದು ಎಂಬ ಜನಪ್ರಿಯತೆ. ಕರ್ನಾಟಕದ ಹೆಮ್ಮೆ. ಮೆದುವಾದ ರುಚಿಕರ ಮಾಂಸ. ಉಣ್ಣೆಯ ಇಳುವರ: 400 ಗ್ರಾಂ ವಾರ್ಷಿಕ.

2

ಹಾಸನ

ಹಾಸನ

ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ

ಬಿಳಿ, ಬಿಳಿ ಮತ್ತು ತೆಳು ಕಂದು ಅಥವಾ ಕಪ್ಪು ಕಲೆಗಳು

33-35

28

2.21

ಸಣ್ಣ ಗಾತ್ರದ ತಳಿ. ಕಿವಿಗಳು ಮಧ್ಯಮ ಗಾತ್ರದ್ದು ಮತ್ತು ಇಳಿಬಿದ್ದಿರುತ್ತವೆ. ಹೆಚ್ಚು ದೂರ ನಡೆಯಬಲ್ಲದು. ಎರಡು ಅಂಗಗಳಲ್ಲಿ ಸಾಮಾನ್ಯವಾಗಿ ಕೊಂಬು ಇರುವುದಿಲ್ಲ. ಕೆಲವು ಟಗರುಗಳಲ್ಲಿ ಮಾತ್ರ ಕೊಂಬು ಕಾಣಬಹುದು. ಮಾಂಸದ ಇಳಿವರಿ ಪ್ರಮಾಣ: 52.5%

ಚರ್ಮ ಬಿಳಿ, ಅತ್ಯಂತ ಗಡುಸಾದ ಕಾಲುಗಳು, ಹೊಟ್ಟೆಯ ಭಾಗದಲ್ಲಿ ಉಣ್ಣೆ ಇರುವುದಿಲ್ಲ. ಮಾಂಸದ ತಳಿ

3

ಡೆಕ್ಕನಿ

ಬೀದರ್, ಗುಲ್ಬರ್ಗಾ, ಯಾದಗಿರಿ

ಬೀದರ್, ಗುಲ್ಬರ್ಗಾ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಡೆಕ್ಕನ್ ಪ್ರಸ್ಥಭೂಮಿ (ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ)

ಹೆಚ್ಚು ಭಾಗ ಕಪ್ಪು ಜೊತೆಗೆ ಬೂದು ಬಣ್ಣದ ಕಲೆಗಳು, ಮಧ್ಯದಲ್ಲಿ ಬಳಿಬಣ್ಣದ ಕೂದಲುಗಳು

45-50

30-40

3.13

ಸಣ್ಣ ಕತ್ತು ಕಿರಿದಾದ ಎದೆ, ಬೆನ್ನು ಮೂಳೆಗಳು ಎದ್ದು ಕಾಣುತ್ತವೆ. ರೋಮನ್ ಮೂಗು, ಇಳಿಬಿದ್ದಿರುವ ಕಿವಿಗಳು ಈ ತಳಿಯೊಳಗೆ ವಿವಿಧ ರೂಪಗಳ ಮಾರ್ಪಾಡುಗಳು ಕಾಣಸಿಗುತ್ತವೆ. ಮುಖ್ಯವಾಗಿ

 1. ಲೋನಂಡ್,
 2. ಸಂಗಮ್ನೇರಿ
 3. ಸೋಲಾಪುರಿ (ಸಂಗೋಲಾ)
 4. ಕೋಲ್ಹಾಪುರಿ

  ಮಾಂಸದ ಇಳುವರಿ ಪ್ರಮಾಣ: 45-47%

ಉಣ್ಣೆಯ ಉತ್ಪಾದನೆ: 700 & 800 ಗ್ರಾಂ/ ಕುರಿ/ ವಾರ್ಷಿಕ. ಕಾರ್ಪೆಟ್ ಗುಣಮಟ್ಟದ್ದು. ಮುಖ್ಯವಾಗಿ ಮಾಂಸದ ತಳಿ.

4

ಬಳ್ಳಾರಿ

ಬಳ್ಳಾರಿ

ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ

ಬಿಳಿ, ಬಿಳಿ ಮತ್ತು ಕಪ್ಪು, ಕಪ್ಪು. ಉಣ್ಣೆ ಗಡುಸಾಗಿದ್ದು ಕೂದಲಿನಂತಿರುತ್ತದೆ. ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ಉಣ್ಣೆ ಇರುವುದಿಲ್ಲ.

35-40

30-35

2.60

ತುಂಗಭದ್ರಾ ನದಿಯ ದಕ್ಷಿಣ ಭಾಗದ ಕುರಿಗಳನ್ನು ಬಳ್ಳಾರಿ ಎಂದು ಉತ್ತರ ಭಾಗದ ಕುರಿಗಳನ್ನು ಡೆಕ್ಕನಿ ಎಂದು ಕರೆಯುತ್ತಾರೆ. ಮಧ್ಯಮ ಗಾತ್ರದ ತಳಿ. ಮರಿಗಳ ಸಂಖ್ಯೆ ಸಾಮಾನ್ಯವಾಗಿ: ಒಂದು, ಅವಳಿಗಳು ಅಪರೂಪ. ಇದು ಡೆಕ್ಕನಿ ತಳಿಯಂತೆ ಕಾಣುತ್ತದೆ. ಟಗರುಗಳಿಗೆ ಕೊಂಬಿರುತ್ತದೆ. ಕಿವಿಗಳು ಮಧ್ಯಮ ಗಾತ್ರದಾಗಿದ್ದು, ಉದ್ದವಾಗಿದ್ದು, ಚಪ್ಪಟೆಯಾಗಿ ಇಳಿಬಿಟ್ಟಿರುತ್ತದೆ. ಬಾಲವು ತೆಳುವಾಗಿ ಸಣ್ಣದಾಗಿ ಇರುತ್ತದೆ. ಮಾಂಸದ ಇಳುವರಿ ಪ್ರಮಾಣ: 47-50%

ಉಣ್ಣೆಯು ಕಾರ್ಪೆಟ್ ಗುಣಮಟ್ಟದ್ದು. ಮುಖ್ಯವಾಗಿ ಮಾಂಸದ ತಳಿ.

5

ಕೆಂಗುರಿ

ಕೊಪ್ಪಳ ಮತ್ತು ರಾಯಚೂರು

ಬಾಗಲಕೋಟೆ, ಕೊಪ್ಪಳ, ರಾಯಚೂರು

ಕಡು ಕಂದು ಇಲ್ಲವೇ ತೆಂಗಿನ ಬಣ್ಣ

35-40

35-40

2.8

ಟೆಂಗುರಿ ಎಂದು ಸಹಾ ಕರೆಯುತ್ತಾರೆ. ಕೆಲವು ಕೆಂಗುರಿಗಳಲ್ಲಿ ಹೊಟ್ಟೆಯ ಭಾಗ ಕಪ್ಪಾಗಿದ್ದು ಅವುಗಳನ್ನು ಜೋಡ್ಕಾ ಎನ್ನುತ್ತಾರೆ. ಕಂದು ಮತ್ತು ಕಪ್ಪು ಬಣ್ಣಗಳ ಮಿಶ್ರಣ ಇರುವ ಕುರಿಗಳನ್ನು ಮಸಕಾ ಎನ್ನುತ್ತಾರೆ. ಕಿವಿಗಳು ಮಧ್ಯಮ ಗಾತ್ರದಲ್ಲಿದ್ದು ಇಳಿಬಿಟ್ಟಿರುತ್ತವೆ. ಗಂಡು ಕುರಿಗಳಲ್ಲಿ ಕೊಂಬಿರುತ್ತದೆ. ಮಾಂಸದ ಇಳುವರಿ ಪ್ರಮಾಣ: 45-47%

ಉಣ್ಣೆಯು ಕಾರ್ಪೆಟ್ ಗುಣಮಟ್ಟದ್ದು. ಮುಖ್ಯವಾಗಿ ಮಾಂಸದ ತಳಿ. ಕರಾವಿನ ಅವಧಿ 3-5 ತಿಂಗಳುಗಳು. ದಿನಕ್ಕೆ ಗರಿಷ್ಠ 300 ರಿಂದ 500 ಮಿ.ಲೀ ಹಾಲು. ಹೆಚ್ಚು ಗಡುಸಾಗಿದ್ದು ವ್ಯತಿರಿಕ್ತ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕೂಡ ಅಧಿಕವಾಗಿರುತ್ತದೆ ಮತ್ತು ಅತಿ ಕಡಿಮೆ ಹಸಿರಿರುವ ಜಾಗಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವಿರುತ್ತದೆ.

6

ಯಲಗ

ಬಿಜಾಪುರ ಮತ್ತು ಬಾಗಲಕೋಟೆ

ಬಿಜಾಪುರ ಮತ್ತು ಬಾಗಲಕೋಟೆ

ಕಡು ಕಂದು

50

35

3.1

ಕಿವಿಗಳು ಮಧ್ಯಮ ಗಾತ್ರದಲ್ಲಿದ್ದು ಇಳಿ ಬಿಟ್ಟಿರುತ್ತವೆ. ಮಾಂಸದ ಇಳುವರಿ ಪ್ರಮಾಣ: 45-47%. ಕೆಲವು ಟಗರುಗಳಲ್ಲಿ ಮಾತ್ರ ಕೊಂಬಿರುತ್ತದೆ.

ತುಪ್ಪಟ; ಕಂದು, ಗಡುಸಾಗಿರುತ್ತದೆ. ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ತುಪ್ಪಟ ಇರುವುದಿಲ್ಲ. ತಳಿಯ ಸ್ಥಾನಮಾನ ಇನ್ನೂ ದೊರಕಿಲ್ಲ.

 

 • ಕುರಿಗಾರರು ಸ್ವ ಇಚ್ಚೆಯಿಂದ ವಿದೇಶಿ ತಳಿಗಳಾದ ರಾಂಬುಲೇಟ್, ಮೆರಿನೋ, ಢಾರ್ಪರ್ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
 • ಯಲಗ ಕುರಿಗಳಿಗೆ ಇನ್ನೂ ಸಹಾ ತಳಿಯ ಸ್ಥಾನಮಾನ ದೊರೆತಿರುವುದಿಲ್ಲ. ಆದರೂ ಸಹಾ ಅದರ ಮಾಂಸದಲ್ಲಿ ವಿಶೇಷ ಗುಣಲಕ್ಷಣಗಳು ಇರುವುದರಿಂದ ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
 • ಬಹು ಫಲಪ್ರದ ನಾರಿಸುವರ್ಣ ತಳಿಯನ್ನು ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಮತ್ತು ಹೆಚ್ಚು ಅವಳಿ ಮತ್ತು ತ್ರಿವಳಿಗಳನ್ನು ಪಡೆಯಲು ಬಳಸಬಹುದಾಗಿದೆ.

III. ಜಿಲ್ಲಾವಾರು ಮೇಕೆಗಳು ಮತ್ತು ಸಂವರ್ಧನೆಗೆ ಶಿಫಾರಸ್ಸು ಮಾಡಲ್ಪಟ್ಟ ನೀತಿಗಳು/Policy

ಕ್ರ.ಸ

ಜಿಲ್ಲೆ

ಇರುವ ತಳಿ

ಶಿಫಾರಸ್ಸು ಮಾಡಲ್ಪಟ್ಟ ನೀತಿ/ಪಾಲಿಸಿ

1

ಬೀದರ್

ಬಿದ್ರಿ/ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ.ಸ್ಥ.ಮೇ)

ಬಿದ್ರಿ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಬಿದ್ರಿ/ಓಸ್ಮಾನಾಬಾದಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

2

ಕಲುಬರ್ಗಿ

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಓಸ್ಮಾನಾಬಾದಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

3

ಬಿಜಾಪುರ, ಬೆಳಗಾವಿ, ಬಾಗಲಕೋಟೆ

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಸಂಗಮ್ನೇರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

4

ಕೊಪ್ಪಳ, ರಾಯಚೂರು

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಓಸ್ಮಾನಾಬಾದಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

5

ಕಾರವಾರ, ಮಂಗಳೂರು ಮತ್ತು ಉಡುಪಿ

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಮಲಬಾರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

6

ಧಾರವಾಡಮ ಗದಗ್, ಹಾವೇರಿ, ಬಳ್ಳಾರಿ ಮತ್ತು ದಾವಣಗೆರೆ

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಜಮುನಾಪಾರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

7

ಚಿತ್ರದುರ್ಗ

ನಂದಿದುರ್ಗ/ವ.ಸ್ಥ.ಮೇ

ನಂದಿದುರ್ಗ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ, ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು ನಂದಿದುರ್ಗ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

8

ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಬೆಂಗಳೂರು (ಗ್ರಾ ಮತ್ತು ನ), ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಕೊಡಗು

ವ.ಸ್ಥ.ಮೇ

ವರ್ಗೀಕರಣಗೊಳ್ಳದ ಸ್ಥಳೀಯ ಮೇಕೆಗಳು (ವ್ಯ.ಸ್ಥ.ಮೇ) ಮಲಬಾರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸಲಾಗುವುದು.

 

 • ವರ್ಗೀಕರಣಗೊಳ್ಳದ ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೇರಿಸಿ ಮಾಂಸೋತ್ಪಾದನೆ ಹೆಚ್ಚಿಸಲು ಬೋಯರ್ ತಳಿಯನ್ನು ಬಳಸಬಹುದಾಗಿದೆ.
 • ಜಮುನಾಪಾರಿ ಮತ್ತು ಬೀಟಲ್ ತಳಿಗಳನ್ನು ವರ್ಗೀಕರಣಗೊಳ್ಳದ ಸ್ಥಳೀಯ ತಳಿಗಳ ಮಾಂಸ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಬಳಸಬಹುದಾಗಿದೆ.

III(a). ವರ್ಗೀಕರಣಗೊಂಡಿರುವ ಕರ್ನಾಟಕದಲ್ಲಿರುವ ದೇಶೀಯ ಮೇಕೆ ತಳಿಗಳ ಗುಣಲಕ್ಷಣಗಳು

 

ಕ್ರ.ಸ

ತಳಿ

ಮೂಲ ಮತ್ತು ಹಂಚಿಕೆ

ಬಣ್ಣ

ಸರಾಸರಿ ದೇಹದ ತೂಕ

ದೇಹದ ಉದ್ದ

ಎದೆಯ ಸುತ್ತಳತೆ (ಸೆಂ.ಮೀ)

ತಳಿಯ ಗುಣಲಕ್ಷಣಗಳು

ಷರಾ/ಇತರೆ

ಗಂಡು (ಕೆ.ಜಿ)

ಹೆಣ್ಣು (ಕೆ.ಜಿ)

ಗಂಡು

ಹೆಣ್ಣು

ಗಂಡು

ಹೆಣ್ಣು

1

ಓಸ್ಮಾನಾಬಾದಿ

ಮೂಲಸ್ಥಾನ ಮತ್ತು ನೆಲೆ: ಮಹಾರಾಷ್ಟ್ರದ ಅಹಮದ್ ನಗರ, ಸೋಲಾಪು ಮತ್ತು ಓಸ್ಮನಾಬಾದ ಜಿಲ್ಲೆಗಳು

ದೇಹದ ಬಹಳಷ್ಟು ಮಟ್ಟಿಗೆ ಕಪ್ಪು ಆದರೆ ಕೆಲವು ಪ್ರಾಣಿಗಳಲ್ಲಿ ಕಿವಿ, ಕತ್ತು ಮತ್ತು ದೇಹದ ಭಾಗಗಳಲ್ಲಿ ಬಿಳಿ ಬಣ್ಣದ ಕಲೆಗಳು ಕಾಣಬಹುದು.

34

32

67.51

69.12

72.04

72.06

ಬಹಳಷ್ಟು ಮಟ್ಟಿಗೆ ಕೊಂಬು ಇರುತ್ತದೆ. ಕೆಲವು ಹೆಣ್ಣು ಆಡುಗಳಲ್ಲಿ ಕೊಂಬು ಇರುವುದಿಲ್ಲ. ತುರಾಯಿ ಸಾಮಾನ್ಯವಾಗಿ ಕಂಡುಬರುತ್ತದೆ. ಕೂದಲ ಬಣ್ಣ ಕಪ್ಪು, ಬೂದು ಬಣ್ಣದ ಚರ್ಮ, ಕಪ್ಪು ಮೂತಿ, ಕಣ್ಣಿನ ರೆಪ್ಪೆಗಳು ಮತ್ತು ಗೊರಸು. ಬೂದು ಬಣ್ಣದ ನೇರ ಮತ್ತು ಹಿಂದಕ್ಕೆ ಬಾಗಿರುವ ಕೊಂಬುಗಳು. ಕಿವಿಗಳು ಮಧ್ಯಮ ಗಾತ್ರದಲ್ಲಿದ್ದು ನೇತಾಡುತ್ತಿರುತ್ತವೆ.

ಮೊದಲು ಮರಿಹಾಕುವ ವಯಸ್ಸು ಮತ್ತು ಸೂಲಿನ ನಡುವಿನ ಅಂತರ 523 ಮತ್ತು 214 ದಿನಗಳು. ಚೆನ್ನಾಗಿ ನಿರ್ವಹಣೆ ಮಾಡಿದರೆ ಸರಾಸರಿ ದಿನದ ಹಾಲಿನ ಉತ್ಪಾದನೆ: 700 ಗ್ರಾಂ ರಿಂದ 1500 ಗ್ರಾಂ ಮತ್ತು ಕರಾವಿನ ಅವಧಿ: 130-150 ದಿನಗಳು. ಮರಿಹಾಕುವ ಸರಾಸರಿ ಮತ್ತು ಸೂಲಿನ ಸರಾಸರಿ: 55.87 ಮತ್ತು 10.52. ಮಾಂಸದ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆಯಿರುತ್ತದೆ. ದ್ವಿ ಉಪಯೋಗದ ತಳಿ.

2

ಜಮುನಾಪಾರಿ

ಉತ್ತರ ಪ್ರದೇಶದ ಜಮುನಾ, ಗಂಗಾ ಮತ್ತು ಚಂಬಲ್ ನದಿ ಪ್ರದೇಶಗಳು

ಸಾಮಾನ್ಯವಾಗಿ ಬಿಳಿ ಅಥವಾ ತಿಳಿ ಹಳದಿ ಬಣ್ಣ, ಕತ್ತು ಮತ್ತು ಮುಖದ ಭಾಗಗಳಲ್ಲಿ ಕಂದು ಬಣ್ಣದ ಚುಕ್ಕಿಗಳು, ಕೆಲವೊಮ್ಮೆ ದೇಹದ ಮೇಲೆ ಕಪ್ಪು ಕಲೆಗಳು ಕಾಣಬಹುದು.

50-60

40-50

77

75

80

75

ಉಬ್ಬಿದ ಮೂಗಿನ ಭಾಗ ಮತ್ತು ಕೂದಲು: ರೋಮನ್ ಮೂಗು ಅಥವಾ ಗಿಳಿ ಮೂಗಿನ ರೀತಿ, ಕಿವಿಗಳು ತುಂಬಾ ತೆಳುವಾಗಿದ್ದು, ಉದ್ದವಾಗಿದ್ದು ನೇತಾಡುತ್ತಿರುತ್ತವೆ. ಎರಡು ಲಿಂಗಗಳಲ್ಲಿ ಕೊಂಬಿದ್ದು ಚಿಕ್ಕ ಬಾಲವಿರುತ್ತದೆ. ಪೃಷ್ಠ ಭಾಗದಲ್ಲಿ ಇರುವ ದಪ್ಪ ಕೂದಲ ಗೊಂಚಲು ರೆಕ್ಕೆ ಗರಿಯಂತೆ ಕಾಣುತ್ತದೆ. ಕೆಚ್ಚಲು ವೃತ್ತಾಕಾರದಲ್ಲಿ ಉತ್ತಮವಾಗಿದ್ದು ಮೊಲೆ ತೊಟ್ಟುಗಳು ಕೋನಾಕಾರದಲ್ಲಿರುತ್ತವೆ.

ಸರಾಸರಿ ದಿನದ ಹಾಲಿನ ಉತ್ಪಾದನೆ: 1500 ಗ್ರಾಂ ರಿಂದ 2000 ಗ್ರಾಂ. ಒಟ್ಟು ಕರಾವಿನ ಉತ್ಪಾದನೆ: 200 ಕೆ.ಜಿ. ಸೂಲು: ಒಂದು ವರ್ಷಕ್ಕೆ ಒಮ್ಮೆ 57% ಒಂದು ಮತ್ತು 43% ಅವಳಿ ಸಾಧ್ಯತೆ. ದ್ವಿ ಉಪಯೋಗದ ತಳಿ.

3

ಸಂಗಮ್ನೇರಿ

ಮಹಾರಾಷ್ಟ್ರದ ಪೂನಾ ಮತ್ತು ಅಹಮದ್ ನಗರ ಜಿಲ್ಲೆಗಳು

ಬಹಳವಾಗಿ ಬಿಳಿ/ಕಪ್ಪು/ಕಂದು ಬಣ್ಣ, ಇತರೆ ಬಣ್ಣದ ಕಲೆಗಳು.

38.7

28.97

69.8

62.5

76

 

ಕಿವಿಗಳು ಮಧ್ಯಮ ಗಾತ್ರದವು ಮತ್ತು ನೇತಾಡುತ್ತಿರುತ್ತವೆ. ಎರಡು ಲಿಂಗಗಳಲ್ಲಿ ಕೊಂಬಿರುತ್ತದೆ. ಅವು ಹಿಂದಕ್ಕೆ ಮತ್ತು ಮೇಲೆ ಬಾಗಿರುತ್ತವೆ. ಹಣೆ ಭಾಗ ಉಬ್ಬಾಗಿರುತ್ತದೆ. ಬಾಲ ತೆಳುವಾಗಿ ಮತ್ತು ಚಿಕ್ಕದಾಗಿರುತ್ತದೆ.

ಚರ್ಮದ ಕೂದಲು ಬಹಳ ಗಡುಸಾಗಿರುತ್ತದೆ. ಮತ್ತು ಬಿಳಿಯಾಗಿರುತ್ತದೆ. ಹಾಲು ಮತ್ತು ಮಾಂಸದ ದ್ವಿ ಉಪಯೋಗದ ತಳಿ. ಮಾಂಸ ಕಟಾವಿನ ಸರಾಸರಿ: 41.16 – 46.14.

4

ಬೀಟಲ್

ಪಂಜಾಬ್ ಮತ್ತು ಹರಿಯಾಣ ರಾಜ್ಯ. ಮುಖ್ಯವಾಗಿ ಪಂಜಾಬಿನ ಅಮೃತ್ ಸರ್, ಗುರದಾಸ್ ಪುರ್, ಫಿರೋಝಿಪುರ್

ಬಣ್ಣದಲ್ಲಿ ಬದಲಾವಣೆಗಳಿರುತ್ತವೆ. ಮುಖ್ಯವಾಗಿ: ಕಪ್ಪು (90%), ಕಂದು (10%) ಜೊತೆಗೆ ಹಲವು ಬಣ್ಣದ ಚುಕ್ಕೆಗಳು

50-62

35-40

86.0

70.5

86.0

73.5

ಗಾತ್ರದಲ್ಲಿ ಜಮುನಾಪಾರಿಗಿಂತ ನಂತರದ ಸ್ಥಾನ ಆದರೆ ಭೌಗೋಳಿಕ ಹೊಂದಾಣಿಕೆ ಮತ್ತು ಮರಿ ಉತ್ಪಾದನೆಯಲ್ಲಿ ಅದಕ್ಕಿಂತ ಉತ್ತಮ. ಉತ್ತಮ ಹೈನು ತಳಿ. ಕಿವಿಗಳು ಉದ್ದನಾಗಿ, ನೇತಾಡುತ್ತಿರುತ್ತವೆ ಮತ್ತು ಚಪ್ಪಟೆಯಾಗಿರುತ್ತವೆ. ಎರಡು ಲಿಂಗಗಳಲ್ಲಿ ಕೊಂಬಿರುತ್ತದೆ. ಅವು ಹಿಂದಕ್ಕೆ ಮತ್ತು ಮೇಲೆ ಬಾಗಿರುತ್ತವೆ. ಹಣೆ ಭಾಗ ಉಬ್ಬಾಗಿರುತ್ತದೆ. ಬಾಲ ತೆಳುವಾಗಿ ಮತ್ತು ಚಿಕ್ಕದಾಗಿರುತ್ತದೆ. ಕೆಚ್ಚಲು ವೃತ್ತಾಕಾರದಲ್ಲಿ ಉತ್ತಮವಾಗಿದ್ದು ಮೊಲೆ ತೊಟ್ಟುಗಳು ಕೋನಾಕಾರದಲ್ಲಿರುತ್ತವೆ. ಗಂಡುಗಳಲ್ಲಿ ಗಡ್ಡವಿದ್ದು ಹೆಣ್ಣುಗಳಲ್ಲಿ ಅದು ಇರುವುದಿಲ್ಲ.

ಒಟ್ಟು ಕರಾವಿನ ಉತ್ಪಾದನೆ: 150-190 ಕೆ.ಜಿ ಸರಾಸರಿ ದಿನದ ಹಾಲಿನ ಉತ್ಪಾದನೆ: 2000 ಗ್ರಾಂ. ಸೂಲು: ಒಂದರಿಂದ-ತ್ರಿವಳಿ. ಬಹಳವಾಗಿ: ಅವಳಿ. ದ್ವಿ ಉಪಯೋಗದ ತಳಿ.

5

ಮಲಬಾರಿ

ಪಶ್ಚಿಮ ರಾಜಸ್ಥಾನ (ಬಾರ್ಮರ್, ಬಿಕನೇರ್, ಜೈಸಲ್ಮೇರ್, ಜಾಲೋರ್, ಜೋದ್ ಪುರ್ ನಾಗೋರ್ ಮತ್ತು ಪಾಲಿ ಜಿಲ್ಲೆಗಳು) ಮತ್ತು ಹತ್ತಿರದ ಉತ್ತರ ಗುಜರಾತ್ ಮತ್ತು ಕೇರಳದ ಕೆಲವು ಭಾಗಗಳು

ಮೈಬಣ್ಣ ಸಂಪೂರ್ಣವಾಗಿ ಬಿಳಿಯಿಂದ ಸಂಪೂರ್ಣವಾಗಿ ಕಪ್ಪು.

38.96

31.12

70.2

63.5

73.8

67.4

ಮಧ್ಯಮ ಗಾತ್ರದ ಮತ್ತು ಉದ್ದನೆ ಕೂದಲಿನ ತಳಿಗಳು. ಗಂಡು ಆಡುಗಳು ಮತ್ತು ಕೆಲವು ಹೆಣ್ಣು ಆಡುಗಳಲ್ಲಿ ಗಡ್ಡದಂತಹ ಕೂದಲಿರುತ್ತದೆ. ಎರಡೂ ಲಿಂಗಗಳಲ್ಲಿ ಸಣ್ಣ ಸ್ವಲ್ಪ ಮಟ್ಟಿಗೆ ತಿರುಗಿದಂತಿರುವ, ಹೊರಗೆ ಮತ್ತು ಮೇಲಕ್ಕೆ ಕೊಂಬುಗಳು, ಮಧ್ಯಮ ಗಾಥ್ರದ, ಹೊರಗೆ ಮತ್ತು ಕಳಕ್ಕೆ ಚಾಚಿದ ಕಿವಿಗಳು. ಕಿವಿಯ ಉದ್ದ: 16 ಸೆಂ.ಮೀ. ಬಾಲ ಸಣ್ಣದು ಮತ್ತು ತೆಳುವಾಗಿರುತ್ತದೆ. ಬಾಲದ ಉದ್ದ: 13 ಸೆಂ.ಮೀ. ಕೆಚ್ಚಲು ಸಣ್ಣದಾಗಿದ್ದು, ವೃತ್ತಾಕಾರದಲ್ಲಿರುತ್ತದೆ ಮತ್ತು ಮೊಲೆ ತೊಟ್ಟುಗಳು ಮಧ್ಯಮ ಗಾತ್ರದಲ್ಲಿರುತ್ತವೆ.

196 ದಿನಗಳ ಕರಾವಿನ ಻ವಧಿಯಲ್ಲಿ ಒಟ್ಟು ಹಾಲಿನ ಇಳುವರಿ: 110 ಕೆ.ಜಿ. ದ್ವಿ ಉಪಯೋಗಿ ತಳಿ.

 

6

ಬಿದರಿ

ಕರ್ನಾಟಕದ ಬೀದರ್ ಜಿಲ್ಲೆ ಮತ್ತು ಸಮೀಪದ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಭಾಗಗಳು

ಹೆಚ್ಚಿನದಾಗಿ ಕಪ್ಪು/ಕಪ್ಪು ಮತ್ತು ಬಿಳುಪು/ಕಪ್ಪು ಮತ್ತು ಕಂದು ಬಣ್ಣದ್ದಾಗಿರುತ್ತವೆ. ಕೊಂಬುಗಳು ಮತ್ತು ಗೊರಸು ಮುಖ್ಯವಾಗಿ ಕಪ್ಪು ಬಣ್ಣದ್ದಾಗಿರುತ್ತದೆ.

31.23

29.12

40.18

37.82

72.38

69.48

ಬಹಳಷ್ಟು ಆಡುಗಳು ಕೊಂಬು ಹೊಂದಿರುತ್ತವೆ. ಕಿವಿಗಳು ನೇತಾಡುತ್ತಿರುತ್ತವೆ. ಮುಖ್ಯವಾಗಿ ಮಾಂಸದ ತಳಿ.

ಮುಖ್ಯವಾಗಿ ಮಾಂಸದ ತಳ.

ಕರ್ನಾಟಕದ ಪ್ರಮುಖ ವಿದೇಶಿ ಆಡಿನ ತಳಿಗಳು

7

ಬೋಯರ್

ಇತರೆ ಹೆಸರುಗಳು: ಆಫ್ರಿಕಾನರ್/ದಕ್ಷಿಣ ಆಫ್ರಿಕಾದ ಸಾಮಾನ್ಯ ಆಡಿನ ತಳಿ/ಬೋಯರ್ಬಕ್

ಮುಖ್ಯವಾಗಿ ಬಿಳಿ ಬಣ್ಣದ್ದಾಗಿದ್ದು ಕೆಂಪು ತಲೆ ಹೊಂದಿರುತ್ತವೆ ಮತ್ತು ಚರ್ಮದ ಮೇಲೆ ಕಲೆಗಳಿರುತ್ತವೆ. ನೇತಾಡುವ ಕಿವಿಗಳು, ಉದ್ದನೆಯ ಕಾಲುಗಳು ಮತ್ತು ಉತ್ತಮ ದೇಹ.

110-135

90-100

78-70

80-74

-

-

ಬಹುಬೆದೆ ಹೊಂದಿರುತ್ತದೆ. ಲೈಂಗಿಕ ಪಕ್ವತೆ: 5 ತಿಂಗಳು. ಮೊದಲ ಸೂಲಿನಲ್ಲಿ ಒಂದು ಮರಿ ನಂತರದ ಸೂಲಿನಲ್ಲಿ ಎರಡು ಮರಿಗಳು ಸಾಮಾನ್ಯ.

ಪ್ರಮುಖ ಉದ್ದೇಶ: ಮಾಂಸ. ಚರ್ಮ ಕೂಡ ಉತ್ತಮವಾಗಿರುತ್ತದೆ. ಗಟ್ಟಿಮುಟ್ಟು ಮತ್ತು ವಾತಾವರಣಕ್ಕೆ ಹೊಂದಾಣಿಕೆ ಚೆನ್ನಾಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚು. ಫಲೀಕರಣ ಮತ್ತು ಮರಿಗಳ ಸರಾಸರಿ ಹೆಚ್ಚು, ಹೆಚ್ಚು ಹಾಲು ಉತ್ಪಾದಿಸುವ ಸಾಮರ್ಥ್ಯ, ಹೆಚ್ಚು ಆಯುಷ್ಯ. ಹೊರಗೆ ಮೇಯುವ ಸಾಮರ್ಥ್ಯ ಹೆಚ್ಚು.

 

ಸೂಚನೆ: ಹೊರನಾಡ ಶುದ್ಧ ಬೋಯರ್ ತಳಿಗಳನ್ನು ಮಿಶ್ರತಳಿ ಸಂವರ್ಧನೆಗಾಗಿ ಹೀಗೆ ಬಳಸಲಾಗುತ್ತದೆ.

 • ಬೋಯರ್ X ಓಸ್ಮಾನಾಬಾದಿ
 • ಬೋಯರ್ X ಜಮುನಾಪಾರಿ
 • ಬೋಯರ್ X ಸಿರೋಹಿ

IV. ಕುರಿ ಮತ್ತು ಮೇಕೆಗಳ ತಳಿ ಸಂವರ್ಧನಾ ಪಾಲಿಸಿ/ನೀತಿಯ ಸಾರಾಂಶ ಮತ್ತು ಶಿಫಾರಸ್ಸುಗಳು

I.              ಪಾಲಿಸಿ/ನೀತಿ ಸಾರಾಂಶ:

 1. ಕರ್ನಾಟಕದಲ್ಲಿನ ಕುರಿ ಮತ್ತು ಮೇಕೆಗಳ ತಳಿ ಸಂವರ್ಧನಾ ನಿಲುವುಗಳು ಮುಖ್ಯವಾಗಿ ಈ ಜಾನುವಾರುಗಳಿಂದ ದೊರೆಯುವ ಮಾಂಸದ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುತ್ತವೆ. ಜೊತೆಗೆ ಕುರಿಗಳಿಂದ ದೊರಕುವ ಉಣ್ಣೆಯ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಿ ಸ್ಥಳೀಯವಾಗಿರುವ ಉಣ್ಣೆ ಬೇಡಿಕೆಗೆ ಸ್ಪಂದಿಸುವುದಾಗಿರುತ್ತದೆ.
 2. ಸಂವರ್ಧನಾ ಸಾಮರ್ಥ್ಯ ಹೆಚ್ಚಿರುವ ಟಗರು ಮತ್ತು ಹೋತಗಳ ಆಯ್ಕೆ ಮತ್ತು ಬಳಕೆಯಿಂದ ವರ್ಗೀಕರಣಗೊಳ್ಳದ ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೇರಿಸುವುದು/ಉತ್ಕೃಷ್ಟ ತಳಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂರಕ್ಷಿಸುವುದು.
 3. ಹಲವು ಬಗೆಯ ನಿರ್ದಿಷ್ಟ ಗುಣಗಳನ್ನು ಹೊಂದಿರುವ ಕುರಿ ಮತ್ತು ಮೇಕೆಗಳ ಗುಣಗಳನ್ನು ವಿಶ್ಲೇಷಿಸಿ ತಳಿಯಾಗಿ ಗುರುತಿಸುವುದು.
 4. ವರ್ಗೀಕರಣಗೊಳ್ಳದ ಸ್ಥಳೀಯ ತಳಿಗಳನ್ನು ಮಾಂಸೋತ್ಪಾದನೆ ಹೆಚ್ಚಿಸಲು ಮೇಲ್ದರ್ಜೆಗೇರಿಸುವುದು.
 5. ಸಂಶೋಧನಾ ಸಂಸ್ಥೆಗಳು ಮತ್ತು ಪಶುವೈದ್ಯ ಮತ್ತು ಪಶುಸಂಗೋಪನಾ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಭಾರತ ಮತ್ತು ವಿದೇಶಗಳಲ್ಲಿನ ವರ್ಣ ವೈವಿಧ್ಯತೆ ಕುರಿತಾದ ತಳಿ ಸಂವರ್ಧನಾ ಅಧ್ಯಯನಗಳನ್ನು ಆಧರಿಸಿ, ಮೇಕೆಗಳಲ್ಲಿ ಓಸ್ಮಾನಾಬಾದಿ ಮತ್ತು ಕುರಿಗಳಿಗೆ ಡೆಕ್ಕನಿ ತಳಿಯನ್ನು ಉಪಯೋಗಿಸಿ ವರ್ಗೀಕರಣಗೊಳ್ಳದ ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೇರಿಸಲು ಸೂಕ್ತವೆಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿನ ಗುರುತಿಸಲ್ಪಟ್ಟಿರುವ ಕುರಿಗಳ ತಳಿಗಳನ್ನು ಸಹಾ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೇರಿಸಲು ಬಳಸಬಹುದಾಗಿದೆ.
 6. ಪ್ರಗತಿಪರ ರೈತರ ಮೂಲಕ ಉತ್ಕೃಷ್ಟ ಹೊರನಾಡಿನ ತಳಿಗಳನ್ನು ಕೊಟ್ಟಿಗೆ ಪದ್ದತಿಯಲ್ಲಿ ಸಾಕಲು ಉತ್ತೇಜನ ನೀಡುವುದು ಮತ್ತು ಜನಪ್ರಿಯಗೊಳಿಸುವುದು.
 7. ಪ್ರಗತಿಪರ ರೈತರ ಮೂಲಕ ಕೊಟ್ಟಿಗೆ ಪದ್ದತಿಯಲ್ಲಿ ಹೆಚ್ಚು ಹಾಲು ಮತ್ತು ಮಾಂಸವನ್ನು ಉತ್ಪಾದಿಸುವ ಉದ್ದೇಶದಿಂದ ವರ್ಗೀಕರಣಗೊಳ್ಳದ ಉತ್ಪಾದನೆ ಕಡಿಮೆ ಇರುವ ಸ್ಥಳೀಯ ತಳಿಗಳನ್ನು ಹೊರನಾಡ ತಳಿಗಳಿಂದ ಸಂಕ್ರಮಣಗೊಳಿಸಿ ಮಿಶ್ರತಳಿ ಉತ್ಪಾದಿಸುವುದು.
 8. ಕಡಿಮೆ ಗರ್ಭಧಾರಣಾ ಮತ್ತು ಸಂತಾನೋತ್ಪತ್ತಿ ಅವಧಿಯನ್ನು ಗಮನದಲ್ಲಿರಿಸಿಕೊಂಡು, ನೈಸರ್ಗಿಕ ಮತ್ತು ಕೃತಕ ಗರ್ಭಧಾರಣೆಯ ಬಳಕೆಯನ್ನು ಮುಂದುವರೆಸುವುದು. ಕುರಿ ಮೇಕೆಗಳಲ್ಲಿ ಮಧ್ಯಮ ಮತ್ತು ದೀರ್ಘಾವಧಿಯ ತಳಿ ಅಭಿವೃದ್ಧಿ ಮತ್ತು ಉತ್ಪಾದನೆ ಹೆಚ್ಚಿಸಲು ಕೊಟ್ಟಿಗೆ ಪದ್ಧತಿಯಲ್ಲಿನ ಜಾನುವಾರುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು.
 9. ಮುಖ್ಯ ಜಾನುವಾರು ಕೇಂದ್ರಗಳನ್ನು ಪ್ರತಿಷ್ಟಾಪಿಸುವುದು/ಬಲಗೊಳಿಸುವ ಮೂಲಕ ಆಯ್ಕೆ ಮಾಡಿರುವ ತಳಿಗಳ ಕೇಂದ್ರ ಗುಂಪುಗಳನ್ನು ಉತ್ಪಾದಿಸುವುದು ಮತ್ತು ಸೂಕ್ತ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಸರಬರಾಜು ಮಾಡುವುದು. ಮುಖ್ಯ ಜಾನುವಾರು ಕೇಂದ್ರಗಳು ರೈತರಿಗೆ ತಳಿಗಳ ಕೇಂದ್ರ ಗುಂಪುಗಳನ್ನು ನೀಡಬಲ್ಲ ಸಂಸ್ಥೆಯಾಗಿ ಬೆಳೆಯುವಂತೆ ರೂಪಿಸುವುದು. ಇದರಿಂದ ತಳಿಗಳ ಕೇಂದ್ರ ಗುಂಪುಗಳನ್ನು ಪಡೆದ ರೈತರು ಉತ್ಕೃಷ್ಟ ತಳಿಗಳ ವರ್ಣವೈವಿಧ್ಯತೆಯನ್ನು ಕಾಪಾಡಬಹುದಾಗಿದೆ ಮತ್ತು ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೇರಿಸಲು ಬಳಸಬಹುದಾಗಿದೆ. ಪಾರಂಪರಿಕವಾಗಿ ಮತ್ತು ಸರ್ಕಾರಿ ಒಡೆತನದ ಫಾರ್ಮುಗಳಲ್ಲಿ ಅವಳಿ ಮತ್ತು ತ್ರಿವಳಿ ಮರಿಗಳಿಗಾಗಿ ಸಂಶೋಧನೆ ನಡೆಸಲು ಸಹಾ ಬಳಸಬಹುದಾಗಿದೆ.
 10. ಸ್ಥಳೀಯ ಕುರಿ ಮತ್ತು ಮೇಕೆಗಳ ದೇಶೀ ತಳಿಗಳ ವರ್ಣ ವೈವಿಧ್ಯತೆಯನ್ನು ಸಂರಕ್ಷಿಸಲು, ಕೃತಕ ಗರ್ಭಧಾರಣೆಯನ್ನು ಜನಪ್ರಿಯಗೊಳಿಸಲು ಮತ್ತು ತಳಿ ಅಭಿವೃದ್ಧಿ ಪಡಿಸಲು ಘನೀಕೃತ ವೀರ್ಯ ಸಂಸ್ಕರಣೆ ಮತ್ತು ಸಂಶೋಧನಾ ಕೇಂದ್ರವೊಂದನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ ಸ್ಥಾಪಿಸುವುದು.
 11. ಮೇಕೆಗಳಲ್ಲಿ ಕೃತಕ ಗರ್ಭಧಾರಣೆಯ ಫಲಿತಾಂಶವನ್ನು ಅಧ್ಯಯನ ಮಾಡಲು ಪೂರ್ವಭಾವಿ ಯೋಜನೆಯನ್ನು ಹಮ್ಮಿಕೊಳ್ಳುವುದು. ಇದರಿಂದ ಕೃತಕ ಗರ್ಭಧಾರಣೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ಮತ್ತು ಫಲಿತಾಂಶಗಳು ಯಶಸ್ವಿಯಾಗಿವೆಯೆ ಎಂಬುದನ್ನು ನಿರ್ಧರಿಸಲು ಸಹಕಾರಿಯಾಗುವುದು.
 12. ಕುರಿಗಳಲ್ಲಿ ಮೊದಲಿಗೆ, ತಾಜಾ ತಿಳಿಗೊಳಿಸಿದ ಟಗರಿನ ವೀರ್ಯವನ್ನು ಹೆಣ್ಣು ಕುರಿಗಳ ಜನನಾಂಗಕ್ಕೆ ನೇರವಾಗಿ ಬಳಸಲು ಉಪಯೋಗಿಸುವುದು. ಘನೀಕೃತ ವೀರ್ಯವನ್ನು ಹೊಟ್ಟೆಯ ಮೂಲಕ ನೇರವಾಗಿ ಗರ್ಭಕೋಶಕ್ಕೆ ಕಸಿಮಾಡಲು ಮಾತ್ರ ಬಳಸುವುದು. ಇಲ್ಲಿಯೂ ಕೂಡ ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಮುನ್ನ ಪೂರ್ವಭಾವಿ ಯೋಜನೆಯನ್ನು ಹಮ್ಮಿಕೊಳ್ಳುವುದು.

II.                  ಶಿಫಾರಸ್ಸುಗಳು

 1. ನಿಶ್ಚಿತ ತಳಿಗಳ ಸಂವರ್ಧನಾ ಪ್ರದೇಶವನ್ನು ಗುರುತಿಸುವುದು, ಸರಿಯಾಗಿ ನಿರ್ವಹಿಸುವುದು ಮತ್ತು ರಕ್ಷಿಸುವುದು.
 2. ನಿಶ್ಚಿತ ತಳಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುವುದು.
 3. ಹೊಸ ತಳಿಗಳನ್ನು ಪರಿಚಯಿಸುವುದರಿಂದ ವಿನಾಶದ ಻ಂಚಿನಲ್ಲಿರುವ ದೇಶೀ ತಳಿಗಳ ಗುಣಮಟ್ಟ ತಿಳಿಗೊಳ್ಳದಂತೆ ಅಥವಾ ಹಾಳಾಗದಂತೆ ನೋಡಿಕೊಳ್ಳುವುದು.
 4. ಸಂವರ್ಧನೆಯ ಸಂದರ್ಭದಲ್ಲಿ ಉತ್ಕೃಷ್ಟ ಗಂಡುಗಳನ್ನು ಮಾತ್ರ ಸೀಮಿತವಾಗಿ ಬಳಸಿಕೊಳ್ಳುವುದು ಮತ್ತು ಸಾಮರ್ಥ್ಯ ಕಡಿಮೆ ಇರುವ ಹೋತ ಮತ್ತು ಟಗರುಗಳನ್ನು ಸಂವರ್ಧನೆಗೆ ಬಳಕೆಯಾಗದಂತೆ ಲಿಂಗಕಸಿ ಮಾಡುವುದು.
 5. ಹೊರ ತಳಿಗಳನ್ನು ಬಳಸಿ ಮಾಡುವ ಮಿಶ್ರತಳಿ ಸಂವರ್ಧನೆಯಲ್ಲಿ ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿವಹಿಸುವುದು.
 6. ರೈತರು ಆಸಕ್ತರಾಗಿ ಭಾಗವಹಿಸುವಂತೆ ನೋಡಿಕೊಳ್ಳಲು ಮತ್ತು ಶುದ್ಧ ತಳಿಗಳನ್ನು ತಮ್ಮ ಪ್ರದೇಶಗಳಲ್ಲಿ ಕಾಪಾಡುವ ಸಲುವಾಗಿ ಸಾಕಷ್ಟು ಪ್ರೋತ್ಸಾಹಕಗಳನ್ನು ನೀಡುವುದು.
 7. ಸಂಸ್ಥೆಯ ಮಾರ್ಗೋಪಾದಿಯಲ್ಲಿ ಉತ್ಕೃಷ್ಟ ತಳಿಗಳ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ರೈತರ ಉತ್ತಮ ತಳಿಗಳೊಂದಿಗೆ ಸಂಬಂಧ ಬೆಸೆಯುವುದು.
 8. ಕುರಿ ಮತ್ತು ಮೇಕೆ ಸಂವರ್ಧನಾ ಸಹಕಾರಿ ಸಂಘಗಳನ್ನು ರಚಿಸಲು ಉತ್ತೇಜನ ನೀಡುವುದು.
 9. ಅರೆ-ಗಾಢ ವ್ಯವಸ್ಥೆಯಿಂದ ನಿರ್ವಹಣೆ ಮಾಡಲು ರೈತರು ಮನಸ್ಸು ಮಾಡುವಂತೆ ಪ್ರೇರೇಪಿಸುವುದು.
 10. ಕುರಿಗಳಲ್ಲಿ ಅವಳಿ ಮತ್ತು ತ್ರಿವಳಿ ಮರಿಗಳನ್ನು ಉತ್ಪಾದಿಸುವುದು. Fec B ಬಹುಫಲಪ್ರದ ವರ್ಣ ತಂತುಗಳನ್ನು ಕಡಿಮೆ ಫಲಪ್ರದ ಹೊಂದಿರುವ ತಳಿಗಳಿಗೆ ಅಳವಡಿಸುವುದು ಮತ್ತು ಸ್ಥಳೀಯ ಕುರಿ/ಮೇಕೆಗಳ ಉತ್ಪಾದನೆಯನ್ನು ಹೆಚ್ಚಿಸುವುದು. ಇದರ ಅನುಕೂಲ ಮತ್ತು ಅನಾನುಕೂಲಗಳನ್ನು ಪರಾಮರ್ಶಿಸಲು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಮುನ್ನ ಪೂರ್ವಭಾವಿ ಯೋಜನೆಯನ್ನು ಹಮ್ಮಿಕೊಳ್ಳುವುದು.

 

ಡಿ.ಎಸ್. ಸುದರ್ಶನ್ ಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ

                                                                        ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ

(ಪಶುಸಂಗೋಪನೆ)

 

 

 

 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top