​​​ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಹೆಚ್ಚುವರಿ ಭತ್ಯೆ ಮಂಜೂರು ಮಾಡುವ ಬಗ್ಗೆ.

​​ಓದಲಾಗಿದೆ:

  1. ಸರ್ಕಾರದ ಆದೇಶ ಸಂಖ್ಯೆ ಆಕುಕ 718 ಹೆಚ್.ಎಸ್.ಹೆಚ್. 2008 ದಿನಾಂಕ 10.12.2009
  2. ಸರ್ಕಾರದ ಆದೇಶ ಸಂಖ್ಯೆ ಆಕುಕ 20 ಹೆಚ್.ಎಸ್.ಹೆಚ್. 2012 ದಿನಾಂಕ 18.12.2012.
  3. ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 29.10.2014ರಂದು ನಡೆದ ಸಭೆಯ ನಡೆವಳಿ.

​​ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ಸರ್ಕಾರಿ ಆದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಹೆಚ್ಚುವರಿಯಾಗಿ ವಿವಿಧ ಭತ್ಯೆಗಳನ್ನು 01.10.2009 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರಿ ಆದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು, ವೈದ್ಯಾಧಿಕಾರಿ ಮತ್ತು ದಂತ ಆರೋಗ್ಯಾಧಿಕಾರಿಗಳಿಗೆ ಹೆಚ್ಚುವರಿಯಾಗಿ ವಿವಿಧ ಭತ್ಯೆಗಳನ್ನು ದಿನಾಂಕ 18.12.2012ರಿಂದ ಜಾರಿಗೆ ಬರುವಂತೆ 6 ವರ್ಷಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇಕಡ 60ರಷ್ಟು, 6ರಿಂದ 13 ವರ್ಷಗಳವರೆಗೆ ಸೇವೆ ಸಲ್ಲಿಸಿರುವರಿಗೆ ಶೇಕಡ 70ರಷ್ಟು ಮತ್ತು 13 ವರ್ಷಗಳ ಮೇಲ್ಪಟ್ಟ ಸೇವೆ ಸಲ್ಲಿಸಿದವರಿಗೆ ಶೇಕಡ 80 ರಷ್ಟು ಹಾಲಿ ನೀಡುತ್ತಿರುವ ವಿಶೇಷ ಭತ್ಯೆಯ ಮೇಲೆ ಮಂಜೂರು ಮಾಡಲು ಹಾಗೂ ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸಿರುವ ವೈದ್ಯರಿಗೆ ಪ್ರತ್ಯೇಕ ವಿಶೇಷ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಲಾಗಿತ್ತು.

ವೈದ್ಯಾಧಿಕಾರಿಗಳ ಬೇಡಿಕೆ ಸಂಬಂಧ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಚರ್ಚಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರಿಗೆ ಮತ್ತು ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಇತರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂದ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಎಲ್ಲಾ ಅಗತ್ಯ ಮಾಹಿತಿ ಪಡೆದು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

ದಿನಾಂಕ 22.05.2015ರಂದು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ವೈದ್ಯರು ಹಾಗೂ ತಜ್ಞ ವೈದ್ಯರಿಗೆ ಭತ್ಯ ಹೆಚ್ಚಳ ಕುರಿತಂತೆ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ತಜ್ಞ ವೈದ್ಯರು ಸರ್ಕಾರಿ ಸೇವೆಯಲ್ಲಿ ತೊಡಗಲು ಮುಂದೆ ಬಾರದ ಕಾರಣಗಳನ್ನು ವಿವರವಾಗಿ ತಿಳಿಸುತ್ತಾ, 2010-11ನೆಯ ಸಾಲಿನಲ್ಲಿ 600 ತಜ್ಞ ವೈದ್ಯರನ್ನು ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿ, ಈ ಹುದ್ದೆಗಳಿಗೆ ಕೇವಲ 237 ಅರ್ಜಿಗಳು ಮಾತ್ರ ಸ್ವೀಕೃತವಾಗಿದ್ದು, ಈ ಎಲ್ಲಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಯ್ಕೆ ಪಟ್ಟಿಯನ್ನು ಆಯೋಗವು ಕಳುಹಿಸಿತ್ತು.  ಈ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಕೋರಲಾಗಿ 137 ತಜ್ಞ ವೈದ್ಯರು ಮಾತ್ರ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಆ ಪೈಕಿ 75 ಜನ ತಜ್ಞ ವೈದ್ಯರು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.  ಈ ತಜ್ಞ ವೈದ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೀಡುತ್ತಿರುವ ಸಂಬಳ ಕಡಿಮೆಯಾಗಿರುವುದು ಮುಖ್ಯ ಕಾರಣವಾಗಿದೆ.  ಎನ್.ಹೆಚ್.ಎಂ. ಯೋಜನೆಯಲ್ಲಿ ತಜ್ಞ ವೈದ್ಯರಿಗೆ ಒಂದು ಲಕ್ಷಕ್ಕೂ ಮೇಲ್ಪಟ್ಟು ಮಾಸಿಕ ಸಂಚಿಕ ವೇತನ ನೀಡುತ್ತಿದ್ದು, ಇಲಾಖೆಯಲ್ಲಿ ತಜ್ಞ ವೈದ್ಯರಾಗಿ ಕೆಲಸಕ್ಕೆ ಸೇರುವವರಿಗೆ 60 ಸಾವಿರಕ್ಕಿಂತ ಕಡಿಮೆ ಸಂಬಳ ನೀಡುತ್ತಿರುವುದರಿಂದ ಸರ್ಕಾರಿ ಸೇವೆಗೆ ಸೇರಲು ತಜ್ಞ ವೈದ್ಯರು ಮುಂದೆ ಬರುತ್ತಿಲ್ಲ.  ಆ ಹಿನ್ನೆಲೆಯಲ್ಲಿ, ತಜ್ಞ ವೈದ್ಯರನ್ನು ಸರ್ಕಾರಿ ಸೇವೆಗೆ ಆಕರ್ಷಿಸುವ ಹಿತದೃಷ್ಠಿಯಿಂದ ಅವರ ಒಟ್ಟು ಸಂಬಳವನ್ನು ಹೆಚ್ಚಿಸುವುದರ ಕುರಿತಂತೆ ಜನಪ್ರತಿನಿಧಿಗಳು ಒತ್ತಾಯ ಮಾಡುತ್ತಿರುವುದನ್ನು ಸಹ ಆರ್ಥಿಕ ಇಲಾಖೆಯ ಗಮನಕ್ಕೆ ತರಲಾಯಿತು.  ಅಲ್ಲದೆ ಈ ವೈದ್ಯರು/ತಜ್ಞರು ಮರಣೋತ್ತರ ಪರೀಕ್ಷೆ, ವೈದ್ಯಕೀಯ ನ್ಯಾಯಿಕ ಪ್ರಕರಣ, ತುರ್ತು ಚಿಕಿತ್ಸಾ ಪ್ರಕರಣಗಳಲ್ಲಿ ಕಛೇರಿಯ ವೇಳೆಯ ನಂತರವು ಸೇವೆ ಸಲ್ಲಿಸಬೇಕಾಗಿರುತ್ತದೆ.  ಇದರಿಂದ ಅವರ ಖಾಸಗಿ ಜೀವನವನ್ನು ಬದಿಗೊತ್ತಿ ಹೆಚ್ಚಿನ ಸಮಯ ಕರ್ತವ್ಯ ನಿರ್ವಹಿಸುತ್ತಿರುವ ಅಂಶಗಳನ್ನು ಪರಿಗಣಿಸಿದ ಆರ್ಥಿಕ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರಿಗೆ ವೈದ್ಯಾಧಿಕಾರಿಗಳಿಗೆ ಮತ್ತು ದಂತ ಆರೋಗ್ಯಾಧಿಕಾರಿಗಳಿಗೆ ಮತ್ತು ದಂತ ಆರೋಗ್ಯಾಧಿಕಾರಿಗಳಿಗೆ ಸರ್ಕಾರದ ಆದೇಶದಂತೆ ಆಕುಕ 20 ಹೆಚ್.ಎಸ್.ಹೆಚ್. 2012 ದಿನಾಂಕ 18.12.2012ರಲ್ಲಿ ನಿಗಧಿಪಡಿಸಲಾದಂತಹ ಭತ್ಯೆ ಅಂದರೆ ತುರ್ತು ಹಾಗೂ ವೈದ್ಯಕೀಯ ನ್ಯಾಯಿಕ ಭತ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದ್ದು, ಅದರಂತೆ ಈ ಆದೇಶ.

​ಸರ್ಕಾರಿ ಆದೇಶ ಸಂಖ್ಯೆ 560 ಹೆಚ್.ಎಸ್.ಹೆಚ್. 2014 ಬೆಂಗಳೂರು ದಿನಾಂಕ 06.07.2015

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವೃಂದಗಳ ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ವೈದ್ಯಕೀಯ ನ್ಯಾಯಿಕ ಪ್ರಕರಣ (Medico Legal Cases) ಹಾಗೂ ತುರ್ತು ಚಿಕಿತ್ಸಾ ಭತ್ಯೆಯನ್ನು ಈ ಕೆಳಕಂಡಂತೆ ಭವಿಷ್ಯಾವರ್ತಿಯಾಗಿ ಅಂದರೆ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರಾತಿ ನೀಡಲಾಗಿದೆ.

ಸೇವಾವಧಿ​ ಎಂ.ಬಿ.ಬಿ.ಎಸ್./ಬಿ.ಡಿ.ಎಸ್. ವಿದ್ಯಾರ್ಹತೆ ಹೊಂದಿರುವವರಿಗೆ ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರಿಗೆ ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಹೊಂದಿರುವವರಿಗೆ
0-6 ವರ್ಷ ಸೇವೆ ಸಲ್ಲಿಸಿದವರಿಗೆ 16,000 ರಿಂದ 21,000 17,600 ರಿಂದ 42,000 20,800 ರಿಂದ 50,800
6-13 ವರ್ಷ ಸೇವೆ ಸಲ್ಲಿಸಿದವರಿಗೆ 17,000 ರಿಂದ 22,000 18,700 ರಿಂದ 43,700 22,100 ರಿಂದ 52,100
13-20 ವರ್ಷ ಸೇವೆ ಸಲ್ಲಿಸಿದವರಿಗೆ 18,000 ರಿಮದ 23,000 19,800 ರಿಂದ 44,800 23,400 ರಿಂದ 58,400

 

2. ಈ ಭತ್ಯೆಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಪೂರಕ ವೆಚ್ಚ-2 ರಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

3. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಮಖ್ಯೆ 190 ಸೇವೆಗಳು-2/2015 ದಿನಾಂಕ 3.07.2015ರಲ್ಲಿ ನೀಡಿರುವ ಸಹಮತದ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

(ಬಿ.ಎಸ್. ನಾಗರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​