ಪೀಠಿಕೆ
ಇ-ಆಡಳಿತ ವಿಭಾಗವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಭಾಗವಾಗಿದ್ದು 2003 ರಲ್ಲಿ ಸೃಜಿಸಲಾಯಿತು. ಸರ್ಕಾರದ ಪ್ರಕ್ರಿಯೆಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ಧೇಶವಾಗಿರುತ್ತದೆ.
ಉದ್ಧೇಶ
- ವಿಶ್ವದಾದ್ಯಂತ ಇರುವ ಉತ್ಕೃಷ್ಟ ಇ-ಆಡಳಿತ ವಿಷಯಗಳನ್ನು ಅಭ್ಯಸಿಸಿ ಮತ್ತು ಸಂಕಲಿಸಿ ಅವುಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕಾಗಿ ಮಾನದಂಡ (benchmark) ನಿಗಧಿಪಡಿಸುವುದು.
- ದತ್ತಾಂಶ ಸಂಗ್ರಹಣೆ (database storage), ಭದ್ರತೆ (security), ಪಾವತಿ, ಸ್ಥಳೀಯ ಭಾಷಾ ಅಳವಡಿಕೆ (ಕನ್ನಡ ಭಾಷೆ), ಆನ್ ಲೈನ್ ಸಂಗ್ರಹಣೆ, ಭೌಗೋಳಿಕ ಮಾಹಿತಿ ಸೇವೆ ಇತ್ಯಾದಿಗಳು ಸೇರಿದಂತೆ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು.
- ವಿವಿಧ ಇಲಾಖೆಗಳಲ್ಲಿ ಇ-ಆಡಳಿತ ಚಟುವಟಿಕೆಗಳ ಅಭಿವೃದ್ಧಿಯನ್ನು ಅನುವು ಮಾಡುವುದು.
- ಇ-ಆಡಳಿತದ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚಿನ ಇಲಾಖೆಗಳನ್ನು ಸೇರಿಸಿ ಅನುಷ್ಠಾನಗೊಳಿಸುವುದು ಮತ್ತು ಸಮಗ್ರಗೊಳಿಸುವುದು.
- ಇ-ಆಡಳಿತಕ್ಕೆ ಅಗತ್ಯವಿರುವ ಸಾಮಾನ್ಯ ಮಾಹಿತಿ ತಂತ್ರಜ್ಞಾನ ಸೌಲಭ್ಯವನ್ನು ಸೃಷ್ಟಿಸುವುದು ಮತ್ತು ನಿರ್ವಹಿಸುವುದು.
- ಕರ್ನಾಟಕ ರಾಜ್ಯದಾದ್ಯಂತ ಮಾಹಿತಿ ತಂತ್ರಜ್ಞಾನದ ನೈಪುಣ್ಯತೆಯನ್ನು ಅಭಿವೃದ್ಧಿಗೊಳಿಸಲು ಒಂದು ತಾಂತ್ರಿಕತೆಯನ್ನು ರೂಪಿಸುವುದು.
ಇಲಾಖೆಯ ದೂರದೃಷ್ಟಿ ಮತ್ತು ಆಶಯ
“ಸರ್ಕಾರದ ಕಾರ್ಯಾಚರಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ, ತನ್ಮೂಲಕ ಎಲ್ಲ ಸಾರ್ವಜನಿಕರಿಗೆ ಅವಶ್ಯವಾದ ಮಾಹಿತಿಯನ್ನು ನೀಡುವುದರ ಜೊತೆಗೆ, ಎಲ್ಲಾ ಸೇವೆಗಳನ್ನು ದಕ್ಷತೆಯಿಂದ ಅಡೆತಡೆಯಿಲ್ಲದೆ ದೊರಕಿಸಿ, ಗುರುತಿಸಿದ ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುವುದು”.